ಮೂರ್, ಸ್ಟ್ಯಾನ್‍ಫರ್ಡ್
1913. ಅಮೆರಿಕದ ಜೀವರಸಾಯನವಿಜ್ಞಾನಿ. ಜನನ ಷಿಕಾಗೋ 4-8-1913. ಪ್ರೋಟೀನುಗಳ ರಚನೆಯ ಆವಿಷ್ಕರ್ತೃ. ಈ ದಿಶೆಯಲ್ಲಿ ಇವರು ಮತ್ತು ಸ್ಟೀನ್ ಎಂಬವರು ಸಲ್ಫೊನೇಟೆಡ್ ಪಾಲಿಸ್ಟೈರಿನ್ ರೆಸಿನ್ (ರಾಳ) ಕಾಲಮುಗಳನ್ನು ಮೊತ್ತಮೊದಲಿಗೆ ಬಳಸಿದರು. ಈ ಕೊಡುಗೆ ಮತ್ತು ಅಪಿನ್‍ಸೆನ್ ಎಂಬವರ ಪ್ರತ್ಯೇಕ ಕೊಡುಗೆ ಎರಡೂ ಯುಗ್ಮವಾದುದರ ಪರಿಣಾಮವಾಗಿ ಸ್ವಚಾಲಿತ ಅಮೈನೋ ಆಮ್ಲಗಳ ವಿಭಾಜಕದ ರಚನೆ ಸಾಧ್ಯವಾಯಿತು. ಇದಕ್ಕಾಗಿ ಮೂರ್, ಅಪಿನ್‍ಸೆನ್ ಮತ್ತು ಸ್ಟೀನ್ ಇವರಿಗೆ ಒಟ್ಟಾಗಿ 1972ರ ನೊಬೆಲ್ ಪಾರಿತೋಷಿಕ ಲಭಿಸಿತು.

	ಪ್ರೋಟೀನನ್ನು ಜಲವಿಚ್ಛೇದನೆ ಮಾಡಿದಾಗ ಅಮೈನೋ ಆಮ್ಲಗಳ ಮಿಶ್ರಣ ಬರುತ್ತದೆ. ಅಚಿದ ಮೇಲೆ ಪ್ರೋಟೀನಿನ ರಚನೆ ತಿಳಿಯುವ ಮೊದಲು ಅದು ಎಷ್ಟು ಅಮೈನೋ ಆಮ್ಲಗಳಿಂದ ಮಾಡಲ್ಪಟ್ಟಿದೆ ಮತ್ತು ಯಾವ ಯಾವ ಅಮೈನೋ ಆಮ್ಲ ಯಾವ ಯಾವ ಮೊತ್ತದಲ್ಲಿ ಅದರಲ್ಲಿ ಸೇರಿದೆ ಎಂಬುದು ತಿಳಿದಿರಬೇಕು. ಮಾರ್ಟಿನ್ ಮತ್ತು ಸಿಂಜ್ ಆವಿಷ್ಕರಿಸಿದ್ದ ಭಾಗೀಕರಣ ಕ್ರೋಮಟಾಗ್ರಫಿ (ಪಾರ್ಟಿಶನ್ ಕ್ರೋಮಟಾಗ್ರಫಿ) ತಂತ್ರ ಅಮೈನೋ ಆಮ್ಲಗಳನ್ನು ವಿಭಿಸುವಲ್ಲಿ ಫಲಕಾರಿಯಾದಷ್ಟು ಅವುಗಳ ನಿಷ್ಕøಷ್ಟ ಪರಿಮಾಣ ಕಂಡುಹಿಡಿಯುವಲ್ಲಿ ಆಗಲಿಲ್ಲ. ಕಾರಣ ಪರಿಮಾಣ ತಿಳಿಯಲು ಬೇಕಾಗುವ ಕಾಲ ಅಧಿಕ ಮತ್ತು ಫಲಿತಾಂಶ ಅಷ್ಟೇನೂ ನಿಷ್ಕøಷ್ಟವಾಗಿರುವುದಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಮೂರ್ ಮತ್ತು ಸ್ಟೀನ್ ಮೊದಲು ಸ್ಟಾರ್ಚ್‍ಕಾಲಮ್ ಕ್ರೋಮಟಾಗ್ರಫಿಯನ್ನು ಪ್ರಯೋಗಿಸಿದರು. ಆದರೆ ಈ ಪ್ರಯೋಗ ಕೆಲವು ಕಾರಣಗಳಿಂದ ಅಷ್ಟೇನೂ ಫಲಕಾರಿಯಾಗಲಿಲ್ಲ. ಸಲ್ಫೊನೇಟೆಡ್ ಪಾಲಿಸ್ಟೈರಿನ್ ರೆಸಿನ್ (ರಾಳ) ಡೊವೆಕ್ಸ್-50ನ್ನು ಸ್ಟಾರ್ಚಿಗೆ ಬದಲಾಗಿ ಬಳಸಿದಾಗ ಫಲಿತಾಂಶಗಳು ಉತ್ತಮಗೊಂಡವು. ಈ ರಾಳಗಳು ಅಯಾನ್ ಸ್ಥಳಾಂತರ ತತ್ತ್ವದ ಮೇಲೆ ಕೆಲಸಮಾಡುತ್ತವೆ. ಅಮೈನೋ ಆಮ್ಲಗಳು. ಪೆಪ್ಟೈಡುಗಳು ಮತ್ತು ಪ್ರೋಟೀನುಗಳು ಅಯಾನುಗಳಂತೆ ವರ್ತಿಸುತ್ತವೆ. ಇವು ಸೋಡಿಯಮ್, ಹೈಡ್ರೊಜನ್ ಮುಂತಾದವುಗಳ ಅಯಾನುಗಳನ್ನು ರಾಳಗಳಿಂದ ಸ್ಥಳಾಂತರಿಸಬಲ್ಲವು. ಇವಕ್ಕೆ ಪೂರಕವಾಗಿ ಬಫರ್ ದ್ರಾವಣಗಳನ್ನು ಉಪಯೋಗಿಸಲಾಗಿದೆ. ರಾಳಗಳ ಕಾಲಮ್ಮಿನಿಂದ ಅಮೈನೋ ಆಮ್ಲಗಳು ಒಂದೊಂದಾಗಿ ನಿಶ್ಚಿತ ಭಾಗದ ಬಫರ್ ದ್ರಾವಣದಲ್ಲಿ ಬರುವುದರಿಂದ ಅವುಗಳ ಪರಿಮಾಣಗಳನ್ನು ಕರಾರುವಾಕ್ಕಾಗಿ ಅಳೆಯಬಹುದು. ಈ ಎಲ್ಲ ಕಾರ್ಯಗಳನ್ನೂ ಒಂದೇ ಯಂತ್ರದಲ್ಲಿ ನಿಯೋಜಿಸಿ ಅದನ್ನು ಸ್ವಚಾಲಿತವಾಗಿ ಕೆಲಸಮಾಡುವಂತೆ ಏರ್ಪಡಿಸಿರುವ ಯಂತ್ರವೇ ಸ್ವಚಾಲಿತ ಅಮೈನೋ ಆಮ್ಲ ವಿಭಾಜಕ. ಈ ತತ್ತ್ವ ಉಪಯೋಗಿಸಿಕೊಂಡು ಅಯಾನ್ ವಿನಿಮಯ ಕಾಲಮ್ ಕ್ರೋಮಟಾಗ್ರಫಿಯನ್ನು ಎಲ್ಲ ತರಹದ ಅಯಾನ್ ರಾಸಾಯನಿಕ ವಸ್ತುಗಳನ್ನೂ ವಿಭಜಿಸಲು ಬಳಸಲಾಗುತ್ತಿದೆ. ಇವುಗಳಲ್ಲಿ ಮುಖ್ಯವಾದುವೆಂದರೆ ನ್ಯೂಕ್ಲಿಯಿಕ್ ಆಮ್ಲಗಳು, ನ್ಯೂಕ್ಲಿಯೊಟೈಡುಗಳು, ಪ್ರೋಟೀನುಗಳೂ ಪೆಪ್ಟೈಡುಗಳು ಇತ್ಯಾದಿ.
(ಟಿ.ವಿ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ